ಧೃಷ್ಟದ್ಯುಮ್ನ
ದ್ರುಪದರಾಜನ ಮಗ.  ಅಯೋನಿಜ.  ದ್ರೌಪದಿಯ ಸಂಗಡ ಅಗ್ನಿಕುಂಡದಿಂದ ಜನಿಸಿದವ.  ಅಗ್ನಿಯ ಅಂಶದಿಂದ ಹುಟ್ಟಿದ ಈತ ಹುಟ್ಟುವಾಗಲೇ ಬಲ, ಕವಚ, ಕುಂಡಲ, ಶಸ್ತ್ರಧಾರಿಯಾಗಿಯೂ ಶೌರ್ಯೋತ್ಸಾಹವುಳ್ಳವನಾಗಿಯೂ ವಯಸ್ಕನಾಗಿಯೂ ಶಸ್ತ್ರಪೂರಿತವಾದ ರಥಾರೂಢನಾಗಿಯೂ ಇದ್ದುದರಿಂದ ಇವನಿಗೆ ಆ ಹೆಸರು ಬಂದಿತು.  ದ್ರೌಪದೀ ಸ್ವಯಂವರವೇರ್ಪಟ್ಟಾಗ ಮತ್ಸ್ಯಯಂತ್ರವನ್ನು ಭೇಧಿಸುವವರೇ ಆಕೆಯನ್ನು ವರಿಸಲು ತಕ್ಕವರು ಎಂಬ ಷರತ್ತನ್ನು ನೆರೆದಿದ್ದ ಅರಸುಗಳಿಗೆ ಹೇಳಿದ.  ಪಾಂಡವರು ದ್ರೌಪದೀಯನ್ನು ಕರೆದುಕೊಂಡು ಕುಂಬಾರನ ಮನೆಗೆ ಹೋದಾಗ ಮರೆಯಲ್ಲಿ  ನಿಂತು ಅವರು ಪಾಂಡವರೆಂದು ತಿಳಿದು ದ್ರುಪದನಿಗೆ ತಿಳಿಸಿದ.

ಭಾರತ ಯುದ್ಧದಲ್ಲಿ ಈತನದು ಮಹತ್ತ್ವದ ಪಾತ್ರ.  ಕೃಷ್ಣನ ಸೂಚನೆಯಮೇರೆಗೆ ಪಾಂಡವರ ಕಡೆ ಸೇನಾಧಿಪತಿ ಪಟ್ಟ ಕಟ್ಟಿಸಿಕೊಂಡ.  ದುರ್ಯೋಧನಾದಿಗಳೊಂದಿಗೆ ಭೀಮಾದಿಗಳು ದ್ವಂದ್ವಯುದ್ಧ ಮಾಡಲು ಕಾರಣನಾದ.  ಪಾಂಡವ ಸೇನೆಯನ್ನು ಕ್ರೌಂಚಪಕ್ಷಿ ಹಾಗೂ ಮಕರ ವ್ಯೂಹಗಳಲ್ಲಿ ವಿನ್ಯಾಸಗೊಳಿಸಿದ.

ಕ್ಷತ್ರಂಜಯ, ಕ್ಷತ್ರದೇವ, ಕ್ಷತ್ರವರ್ಮ, ಕ್ಷತ್ರಧರ್ಮ - ಎಂಬ ಈತನ ನಾಲ್ಕು ಮಂದಿ ಮಕ್ಕಳನ್ನು ಯುದ್ಧದ ಹದಿನಾಲ್ಕನೆಯ  ದಿನ ದ್ರೋಣ ಕೊಂದ.  ಹದಿನೈದನೆಯ ದಿನ ಈತ ದ್ರೋಣನನ್ನು ಕೊಂದ.  ಹದಿನೆಂಟನೆಯ ದಿನ ದುರ್ಯೋಧನನೊಂದಿಗೆ ಯುದ್ದ ಮಾಡಿದ.  ಸೋತ ದುರ್ಯೋಧನ ಕುದುರೆ ಏರಿ ಓಡಿದ.  ಕಡೆಗೆ ದ್ರೋಣನ ಮಗ ಅಶ್ವತ್ಥಾಮನಿಂದ ಸಾವನ್ನಪ್ಪಿದ.
(ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ